Public News

News Subject: 
ಹುಬ್ಬಳ್ಳಿ: ಬಿಜೆಪಿ ಪ್ರಣಾಳಿಕೆಯಲ್ಲಿ ಸುಳ್ಳಿನ ಸರಮಾಲೆ- ಡಿಕೆಶಿ ಕಿಡಿ
Category: 
Politics
Body: 

ಹುಬ್ಬಳ್ಳಿ: ಆಸ್ತಿ ತೆರಿಗೆಯಲ್ಲಿ ಪ್ರತಿಶಿತ 50ರಷ್ಟು ಕಡಿತ ಸೇರಿದಂತೆ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ತಮ್ಮ ಪಕ್ಷ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯ ಪ್ರತಿ ವಾಗ್ದಾನಗಳನ್ನೂ ಈಡೇರಿಸಿ ಜಾರಿಗೊಳಿಸಲು ಕಟಿಬದ್ದರಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾವು ಬಿಜೆಪಿಯವರಂತೆ ಸುಳ್ಳು ಹೇಳುವವರಲ್ಲ, ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುವ ದೃಢ ಸಂಕಲ್ಪ ಮಾಡಿದ್ದೇವೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ, ರಾಜ್ಯ ಹಾಗೂ ಸ್ಥಳೀಯವಾಗಿ ಅವರದ್ದೇ ಸರಕಾರ ಇತ್ತು. ಆದರೆ ಜನರಿಗೆ ಏನು ಲಾಭ ಆಗಿದೆ ಎಂದು ಪ್ರಶ್ನಿಸಿದರಲ್ಲದೇ ಜನರನ್ನು ತಪ್ಪು ದಾರಿಗೆ ಎಳೆಯುತ್ತಾ ಸ್ವಾಭಿಮಾನ ಮತದಾರರನ್ನು ಬಿಜೆಪಿಯವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಹು-ಧಾ ಮಹಾನಗರ ಗುಂಡಿಗಳ ನಗರ, ಇಲ್ಲಿ ಡ್ಯಾನ್ಸ್ ಕಲಿಯಬೇಕಿಲ್ಲಾ ಅದಾಗಲೇ ಬರುತ್ತೆ. ಇದಕ್ಕೆ ಇವರಿಗೆ ಮತ ಹಾಕಬೇಕಾ? ಅಡುಗೆ ಅನಿಲಕ್ಕೆ ಪೈಪ್ ಲೈನ್ ಹಾಕುತ್ತೇವೆ ಎಂದು ಹೇಳಿ ಎಲ್ಲಾ ಪೆಟ್ರೋಲ್ ಬಂಕ್‍ನಲ್ಲಿ ಇವರ ಫೋಟೋ ಹಾಕಿದ್ದೀರಿ, ಬಿಜೆಪಿಯವರ ಪ್ರಣಾಳಿಕೆ ಸುಳ್ಳಿನ ಸರಮಾಲೆ. ಬಿಜೆಪಿಯವರಿಗೆ ನುಡಿದಂತೆ ನಡೆಯಲು ಆಗಲಿಲ್ಲ, ಮಹಾನಗರದ ಮತದಾರರ ಮತ ಕೇಳುವ ನೈತಿಕತೆ ಇವರಿಗಿಲ್ಲ ಎಂದು ಹರಿಹಾಯ್ದರು.

ಹು-ಧಾ ಮಹಾನಗರ ಪಾಲಿಕೆ ಟಿಕೆಟ್ ಹಂಚಿಕೆಯಲ್ಲಿ ಚರ್ಚೆ ಮಾಡಿ ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಿದೆ, ಬಹಿರಂಗ ಸಭೆ ಮಾಡಲು ನಿರ್ಭಂದ ಹಾಕಿದೆ. ಜವಾಬ್ದಾರಿಯುತವಾಗಿ ಕಾಂಗ್ರೆಸ್ ನಡೆದುಕೊಳ್ಳುವುದು. ಈ ಹಿನ್ನೆಲೆಯಲ್ಲಿ ನಾವು ಸಭೆ ಮಾಡಲ್ಲಾ. ಇಲ್ಲಿನ ನಮ್ಮ ಪಕ್ಷದ ಮುಖಂಡರು ಸ್ಥಳೀಯ ಸ್ಥಿತಿಗತಿ ಅಧ್ಯಯನ ಮಾಡಿ ಒಳ್ಳೆಯ ನಗವನ್ನಾಗಿ ಪರಿವರ್ತನೆ ಮಾಡಲು ಉತ್ತಮ ಪ್ರಣಾಳಿಕೆ ಸಿದ್ದಪಡಿಸಿದ್ದಾರೆ, ಪ್ರಣಾಳಿಕೆ ಮಾಡಿದ ಎಲ್ಲ ಮುಖಂಡರು ಅಭಿನಂದಾರ್ಹರು ಎಂದು ಶ್ಲಾಘಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷ ದೃವ ನಾರಾಯಣ, ಮಾಜಿ ಸಚಿವ ಶಿವಾನಂದ ಪಾಟೀಲ್, ಶಾಸಕ ಪ್ರಸಾದ್ ಅಬ್ಬಯ್ಯ, ಮಾಜಿ ಎಮ್‍ಎಲ್‍ಸಿಗಳಾದ ನಾಗರಾಜ ಛಬ್ಬಿ, ಶ್ರೀನಿವಾಸ ಮಾನೆ, ಸದಾನಂದ ಡಂಗನವರ, ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಬಂಗಾರೇಶ ಹಿರೇಮಠ, ಎಮ್.ಎಸ್.ಅಕ್ಕಿ, ವಿನೋದ ಅಸೂಟಿ, ರಜತ್ ಉಳ್ಳಾಗಡ್ಡಿಮಠ, ಶಹಜಮಾನ್, ಷರೀಫ್, ಅಬ್ದುಲ್ ಪಾಟೀಲ್, ಸೇರಿದಂತೆ ಮುಂತಾದವರು ಇದ್ದರು.

Reach Count: 
33802
Show Detail Screen Advertisement: 
Yes